Tuesday 22 July 2014

ಗಂಧವತಿಯ ಘಮಲು

       ಮಳೆಯು ನಮ್ಮ ಬದುಕಿನ ಅತ್ಯದ್ಭುತವಾದ ಅನುಭವ. ಮೋಡದ ಒಡಲನ್ನು ಕರಗಿಸಿ ಹನಿಹನಿಯಾಗಿ ಭೂಮಿಯತ್ತ ಪ್ರವಹಿಸಿ ಆಕೆಯನ್ನು ಸಂಪದ್ಭರಿತಳನ್ನಾಗಿಸುವುದು ಈ ಮಳೆ. ಬಿಸಿಲು ಬೆಂಗಾಡಲ್ಲಿ ಬಸವಳಿದ ಅಸಂಖ್ಯಾತ ಜೀವಕೋಟಿಯ ಎದೆಗೆ ಪುಳಕವನ್ನು ಈಯುತ್ತಾ ತೋಯುತ್ತಾ ಹರುಷವನ್ನು ನೀಡುತ್ತೆ . ಬಾನಲ್ಲಿ ಬಣ್ಣಗಳ ಬಿಲ್ಲನ್ನು ನೆಟ್ಟಂತೆ  ನಿಂತ ಜನಮನದ ಕನಸುಗಳಿಗೆ  ಶೃಂಗಾರ ಬಳಿಯುತ್ತದೆ .
       ಎಷ್ಟು  ಸಮಯದಿಂದ ಮಳೆಗಾಗಿ ಕಾಯುತ್ತೇವೆ; ಪ್ರಾರ್ಥಿಸುತ್ತೇವೆ. ಇನ್ನಿಲ್ಲದ ತಯಾರಿಗಳನ್ನು ಮಾಡಿಕೊಂಡಿರುತ್ತೇವೆ. ಮಳೆ ತಂದ ಚಳಿ ಬಿಡಲು ಒಲೆ ಎದುರು ತಪಸ್ಸು ಕೂತು ಹಳೆಯ ಮಧುರ ನೆನಪುಗಳನ್ನೆಲ್ಲ ಹಲಸಿನ ಹಪ್ಪಳ   ಮೆಲ್ಲುತ್ತಾ  ಮೆಲುಕು ಹಾಕುತ್ತೇವೆ. ಹೊಸ ರೈನ್ ಕೋಟು , ಕೊಡೆ . ಬ್ಯಾಗು ಹಾಕಿಕೊಂಡು ಪೇಪರ್ ದೋಣಿ ಬಿಡುತ್ತಾ ಶಾಲೆಗೇ ನಡೆಯುವ ಪುಟಾಣಿವಿಂಡು ನಮ್ಮ ಬಾಲ್ಯವನ್ನು ನೆನೆಪಿಸದೆ  ಇರದು . ತಾಯ್ನಾಡನ್ನು ಬಿಟ್ಟು ಎಷ್ಟೇ ದೂರ ನಾವು ಬಂದಿರಲಿ ಕಾಡುವುದು ಅದೇ... ಮನಸು ಭಾವನಾತ್ಮಕವಾಗಿ ಮೆಲ್ಲುವ ಸವಿಯೂ ಅಲ್ಲಿನದೇ .
       ಕಿಟಕಿಯಲ್ಲಿ ಕೈ ಚಾಚಿದರೆ ಮರುಭೂಮಿಯ ಈ ಪರನಾಡಿನಲ್ಲಿ ಮಳೆಯಿಲ್ಲ; ಕಣ್ಮನ ತಣಿಸು ಝರಿಯಿಲ್ಲ; ಒಡಲನ್ನು ಹಾಯೆನಿಸುವ ಬಯಲ ಗದ್ದೆಯ ಹಸುರಿಲ್ಲ; ಹಲಸಿನ ಕಾಯಿಯ ಕಡುಬಿಲ್ಲ; ! ಎಷ್ಟೋ ಲಕ್ಷ ಜನರಿಗೆ ಉದ್ಯೋಗ ನೀಡಿದ ಮಳೆಗೆ ಇಲ್ಲಿ ಉದ್ಯೋಗವಿಲ್ಲ!
ಹೌದು ಓದುಗರೇ ,  ಪ್ರತಿಬಾರಿ ಮಳೆಗಾಲ ಬಂದಾಗ ನನಗೆ ನನ್ನ ನಾಡು ಯಾಕೋ ತುಂಬಾನೇ ನೆನಪಾಗುವುದು. ಜಿಟಿಜಿಟಿ ಮಳೆಯಲ್ಲಿ ನೆನೆಯಲು ಆಸೆ ಹುಟ್ಟುವುದು.ಕಲ್ಲಣಬೆಯ ಪಲ್ಯ ತಿನ್ನಲು ಬಯಕೆಯಾಗುವುದು. ಎಲ್ಲದುಕಿಂತ ಹೆಚ್ಚಾಗಿ ಮನಸ್ಸು ಅರಳುವುದು ಮಳೆಗಾಲದ ಸುಂದರ ಪುಷ್ಪಗಳಿಗಾಗಿ.
          ಪ್ರಕೃತಿ ನಮ್ಮ ಬದುಕಿನಲ್ಲಿ ಎಷ್ಟು ಬೆರೆತು ಹೋಗಿದೆ  ಎಂದರೆ ಋತುಮಾನಗಳು ಅಷ್ಟು ಕಡಿಮೆ ಅವಧಿಯಲ್ಲಿ ಪರಿವರ್ತನೆಯಾಗಿ ಬಂದು ನಿಂದು ತಮ್ಮಕಾಯಕ  ಮುಗಿಸಿ ಹೋಗಿಬಿಟ್ಟಿರುತ್ತವೆ. ನಮಗದರ ಅರಿವೇ ಇರುವುದಿಲ್ಲ . ಹೆಸರೇ  ಅರಿಯದ ಅಸಂಖ್ಯಾತ ಪುಷ್ಪಗಳು ಪೃಥ್ವಿಯ ರೋಮರೋಮದಿಂದ ಪುಟಿದೆದ್ದು ಅರಳಿ ನಿಂತಿರುತ್ತವೆ. ಕೇವಲ ಮಳೆಯ ಆಗಮನದಿಂದ ! ಸುತ್ತೆಲ್ಲ ಪರಿಸರವು ಈ ಸುಮಗಳ ಸುವಾಸನೆಯ ಸಮ್ಮಿಶ್ರ ಹೊತ್ತು ತಂಗಾಳಿಯೊಂದಿಗೆ ಬೆರೆತು ಧರೆಯೆಲ್ಲ ಪಸರಿಸುತ್ತದೆ . ಬಿಳಿ,ಹಳದಿ,ಕೆಂಪು,ನೀಲಿ  ಬಣ್ಣದ ವಿನ್ಯಾಸದ ಚಿತ್ರವಿಚಿತ್ರ ಹೂ-ಹಸಿರು ಮನೆಯ ಅಕ್ಕಪಕ್ಕದಲ್ಲೇ ಮೊಳಕೆ ಬಂದು ಹೂದೊಟವನ್ನೇ ಮಾಡಿಕೊಂಡಿರುತ್ತವೆ . ಈ ಬಗೆಯ ಸವಿಯನ್ನು ಪ್ರತಿಬಾರಿಯೂ ಅನುಭವಿಸುತ್ತಿದ್ದೆ. ಚಿಕ್ಕಂದಿನಲ್ಲಿ ಅವುಗಳನ್ನು ತಂದು ಮಾಲೆ ಮಾಡಿ ಆಟ ಆಡಿದ್ದು ಉಂಟು . ಹಗಲಲ್ಲಿ ಬುಟ್ಟಿ ತುಂಬಾ  ತುಂಬಿಕೊಂಡು ಮೂಲೆಯಲ್ಲಿ ಬಚ್ಚಿಟ್ಟು ಸಂಜೆ ದುರ್ವಾಸನೆ ಬೀರಿದಾಗ ಮನೆಮಂದಿಯಿಂದ ಬೈಸಿದ್ದುಂಟು. ಹೂವು ಹೆಕ್ಕಲು ಹೋಗಿ ಚೇರಟೆ ಬಸವನ ಹುಳು ಮುಟ್ಟಿ ಪೆಚ್ಚು ಮೋರೆ ಹಾಕಿದ್ದೂ ಇದೆ. ಕೆಂಪು ಬಣ್ಣದ ಹೂವೊಂದನ್ನು ಟೀಚರ್ ಗೆ ಕೊಟ್ಟು ಮುಡೀರಿ ಎಂದು ಹಲ್ಲು ಕಿಸಿದಾಗ ಪಾಪ ಆ ಮಾಡರ್ನ್ ಟೀಚರ್ ಮುಡಿಯಲಾಗದೆ ಎಸೆಯಲಾಗದೆ 'ಆಮೇಲೆ' ಎನ್ನುತ್ತಾ ಬ್ಯಾಗಲ್ಲಿ ತೂರಿಸಿದ್ದೂ ಉಂಟಲ್ಲ !  ನನ್ನನ್ನು ಕಾಡುವ ಮಳೆರಾಯನ ಸಹಸ್ರ ಪುಷ್ಪ ಕುವರಿಯರೇ ಈ ಬಾರಿಯಾದರೂ ನಿಮ್ಮ ಮೈ ಸವರಬೇಕು.
           ತಾವು ಮೇಲೆದ್ದು ಅರಳಿ ಮಳೆಗಾಲ ಮುಗಿದೊಡನೆ ಅಗೋಚರವಾಗುವ ಅದ್ಭುತಗಳು ಹುಟ್ಟಿ ಬರುವಾಗ ಡಂಗೂರ ಸಾರಿ ಬರೋಲ್ಲ .ಸದ್ದಿಲ್ಲದೇ ಹೋಗಿಯೂಬಿಡುತ್ತವೆ . ಭಾವಜೀವಿಗಳು ಖಂಡಿತವಾಗಿಯೂ ಈ ವಿಸ್ಮಯವನ್ನು ಕೃತಿಗಿಳಿಸುತ್ತಾರೆ ;ಚಿತ್ರಕಾರರು ಅದರ ಸುಂದರ ಚಿತ್ರಬಿಡಿಸುತ್ತಾರೆ . ಇನ್ನು ಕ್ರಿಯಾಶೀಲರು ತಮ್ಮ ಕ್ಯಾಮೆರ ಕಣ್ಣಲ್ಲಿ ಕ್ಲಿಕ್ಕಿಸುತ್ತಾರೆ ... ಯಾಕೆಂದರೆ ಮಳೆಗಾಲ ಮುಗಿಯುತ್ತಲೇ ಮಂಗಮಾಯವಾಗುವ ನಿಮ್ಮ ಜಾಡನ್ನು ಹುಡುಕೋದು ಅಸಾದ್ಯದ ಮಾತು. ನೀವು ಹೋದ ಮೇಲೆ ಇಳೆಯಲ್ಲಿ ಆ ಕಳೆ ಇರುವುದೇ ಇಲ್ಲ!
ಈ ಅಗಣಿತ ಸುಮರಾಶಿಗಳು  ಇರುವಷ್ಟು ದಿನ ಮಾತ್ರ ಫಲಧಾನ್ಯಗಳಿಂದ ಇನ್ನೇನು ಬಸಿರಾಗುವ ಇಳೆಯೆಂಬ ಗಂಧವತಿಯ ಮೈಯೆಲ್ಲ ಸುಗಂಧ ದ್ರವ್ಯದ ಘಮಲು ತುಂಬುತ್ತವೆ. ಅವನ್ನು ಗುರುತಿಸಿ ಘಮಿಸಿದವಗೆ  ಮತ್ತು ಇಂದು ಅದರಿಂದ  ದೂರವಾಗಿ ಎಲ್ಲೋ ಅವುಗಳ ನೆನಪಲ್ಲಿ ಹಾತೊರೆದು ಕನವರಿಸುವವಗೆ ಗೊತ್ತು. ನಿಜ! ಕೆಲವರು ಮಾತ್ರ ಜೀಮೂತದಿಂದ ಹನಿಯಾಗಿ ಇಳಿದ ವರ್ಷವನ್ನು ಬಾನಡಿಗೆ ಮೊಗವರಳಿಸಿ ಕೈ ಚಾಚಿ ನಿಂತು ಅನುಭವಿಸುತ್ತಾರೆ.ಇನ್ನು ಹಲವರು  ನೀರಲ್ಲಿ ಬರೀ ಒದ್ದೆಯಾಗುತ್ತಾರಷ್ಟೇ ........
                                                                                                 

                                                                                                               - ಕಾವ್ಯಮಯಿ 
























   

Wednesday 16 April 2014

ಅಮ್ಮನ ಪತ್ರಗಳು



           ಅಮ್ಮ ಅನ್ನುವ ಪದವೇ ಅಂಥಾದ್ದು. ಶುದ್ಧ  ಹೃದಯದಿಂದ ಮೂಡುವಂತಹುದು. ಹುಟ್ಟಿ ಬೆಳೆದು ಸಾಯೋವರೆಗೂ ಜೊತೆಗಿರುವ ಒಂದೇ ಪದ . ಸಹಸ್ರ ಅರ್ಥಗಳ ಪದರಾಶಿಯೊಳಹೊಕ್ಕು  ಅಮ್ಮ ನಿನ್ನರ್ಥ ಕೇಳಿದರೂ ಸುಸ್ತಾದ ಬಿಸಿಯುಸಿರ ಸುಯಿಲು 'ಅಮ್ಮಾ ' ಅಂತಲೇ ಹೇಳುತ್ತದೆ . ಮನತುಂಬಿದ ಅಮ್ಮನ  ನೆನೆಪಿಂದ ತೇಯ್ದ ಕಣ್ಣ ಅಂಚನ್ನು ಒರೆಸಿ ಒಟ್ಟುಗೂಡಿಸಿ ಶಾಯಿಯಾಗಿಸಿ ಪಡೆದ ಬಾಂಧವ್ಯದಿಂದ ಬರೆಯುತ್ತಿದ್ದೇನೆ .
           ಎಂಟು ತಿಂಗಳ ಹಿಂದೆ ಕುವೈಟ್ ಎಂಬ ದೇಶಕ್ಕೆ ಬಂದಾಗ ಮನಸೊಳಗೆ ಇದ್ದದ್ದು ಹೊಸತೊಂದು ಕೌತುಕ . ಮೂರು ಮುಕ್ಕಾಲು ಸಾವಿರ ಮೈಲು ಆಗಸದಲ್ಲಿ ಹಾರಿ ಇಳಿದಾಗ ಬಿಸಿಕೊದಿವ ಗಾಳಿಯು ನೀಡಿದ ಸ್ವಾಗತದಲ್ಲಿ ಕುವೈಟ್ ಬಂತು ಎಂಬ ಹರ್ಷೋದ್ಗಾರ ಮೊಳೆಯಿತಾದರೂ ಹಿಂದೆ ತಿರುಗಿ ನೋಡಿದ್ರೆ ಅಪ್ಪ ಅಮ್ಮ ಯಾರೂ ಇರಲಿಲ್ಲ . ೪ ಗಂಟೆ ಮುಂಚೆ ಅವರನ್ನೆಲ್ಲ ಬಿಟ್ಟು ಬಂದಾಗಿತ್ತು . ಹಬ್ಬಿ ಜೊತೆ ಫ್ಲಾಟ್ ಗೆ ತೆರಳಿ ಮನೆಯಿಂದ ತಂದಿದ್ದ ಲಗೇಜನ್ನು ಬಿಡಿಸಿ ಜೋಡಿಸಲು ಅಣಿಯಾದೆ . ಆಗ ಸಿಕ್ಕಿತು ಆಸೆ ತುಂಬಿದ ಕಂಗಳಿಂದ  ನಗುತ್ತ ಎತ್ತಿಕೊಳ್ಳು ಎಂದು ಕರೆಯುವಂತೆ ನೋಡುತ್ತಿದ್ದ ಪತ್ರವೊಂದು .......
          ನನ್ನಮ್ಮ ಪ್ರೀತಿಯಿಂದ ಬರೆದ ಪತ್ರವದು ;ಏರ್ ಪೋರ್ಟ್ನಲ್ಲಿ ಕೊನೆ ತನಕವೂ ಜಾಗ್ರತೆ ಮಾಡು, ಗಂಡನನ್ನು ಚೆನ್ನಾಗಿ ನೋಡಿಕೋ ,ಊಟ ಸರಿಯಾಗಿ ಮಾಡು , ಕೋಪ ಮಾಡಬೇಡ , ಎಣ್ಣೆ ತಿಂಡಿ  ತಿನ್ನಬೇಡ , ಬೆಳಿಗ್ಗೆ ಬೇಗ ಏಳು ಎಂದು ಹೇಳುತ್ತಾ, ಎರಡು ಕೈಗಳನ್ನು ನಡುಕದಿಂದ ಹಿಸುಕಿದಂತೆ ಹಿಡಿದು ಕಣ್ತುಂಬಾ ಇನ್ನೇನು ಒಡೆದು ಹೊರಹೊಮ್ಮಬೇಕೆಂದು ಕಾದು ಕೂತ  ಕಣ್ಣೀರಿನಲ್ಲಿ ಕಳುಹಿಸಿದ್ದ ಪತ್ರ!  ನಂಗೆ  ಬೇಕಾದ ಡ್ರೆಸ್ಸು ,ತಿಂಡಿ ಹಪ್ಪಳ, ಹಲಸಿನ ಕಡುಬು ಎಂದು ಏನೆಲ್ಲ ಕಟ್ಟಿಕೊಟ್ಟಿದ್ದಳು... ಅದರೊಂದಿಗೆ ಅಮೂಲ್ಯ ಪ್ರೀತಿಯ  ಧಾರೆ ಹೊತ್ತ ಪತ್ರ.......
      ಅದೇ ಮಾತುಗಳು .... ನಾನು ಅವನ್ನೆಲ್ಲ ಹೇಗೆ ಪಾಲಿಸುತ್ತೇನೋ ಅನ್ನುವ ಭಯ ಅಮ್ಮನಿಗೆ. ಒಂದೆರಡು ಅಡುಗೆ ರೆಸೆಪಿಗಳು. ಕಿವಿಮಾತುಗಳು . 'ನೀವು ಚೆನ್ನಾಗಿರಿ,  ನಮ್ಮ ಚಿಂತೆ ಬೇಡ , ಪುರುಸೊತ್ತು ಸಿಕ್ಕಿದಾಗ ಫೋನು ಮಾಡು , ಕರಿಮೆಣಸು ಬಿಡಿಸಿ ಇಡು, ಮೆಣಸಿನ ಹುಡಿ, ಸಾರಿನ ಹುಡಿ  ಡಬ್ಬಿಯಲ್ಲಿ ಹಾಕಿ ಇಡು ' ಎಂದು ಪತ್ರದ ಖಾಲಿ ಕಡೆಯೆಲ್ಲ ಬರೆದು ಮಡಚಿ ಪಾರ್ಸೆಲ್ ಮಾಡಿದ್ದಳು ನನ್ನಮ್ಮ . ಇಂದು facebook, viber , whatsapp , skype ,GTalk  ಏನೆಲ್ಲಾ ಬಂದಿದೆ . ಎದುರು ಬದುರು ಕೂತು video chat ಮಾಡಿದರೂ   ಮುಗಿಯದೇ ಮತ್ತೆ ಕೇಳಬೇಕೆನಿಸುವ ನನ್ನ ದೇವತೆಯ ಮಾತು . ಬರೆದಷ್ಟೂ , ಹೇಳಿದಷ್ಟೂ ಮುಗಿಯದವಳ ಕುರಿತು. ... ಅವಳ ನೆನಪಾದಾಗಲೆಲ್ಲ video chat ಗಿಂತ ಅವಳ ಪತ್ರ ನೋಡೋದೇ ಜಾಸ್ತಿ .      
      ಅದೇನು ಅನುಭಾವವೋ ಅರಿವಾಗೋದಿಲ್ಲ . ಮಗುವಾಗಿ ಹುಟ್ಟಿದಂದಿನಿಂದ ಮದುವೆಯಾಗಿ ಇಷ್ಟು ದೂರ ಬರೋವರೆಗೂ ತನ್ನ ಜೀವವಾಗಿ ನನ್ನ ಪಾಲಿಸಿದ ಅವಳ ಸಮರ್ಪಣೆಗೆ ಯಾರೂ ಸಮಾನರಿಲ್ಲ . ಬೆಳಗ್ಗೆ ಎಲ್ಲರಿಗಿಂತ ಬೇಗ ಎದ್ದು ಒಲೆ ಹಚ್ಚಿ ಬಿಸಿಬಿಸಿಯಾಗಿ ಅನ್ನ  ಪಲ್ಯ  ತಿಂಡಿ ಮಾಡಿ ಬುತ್ತಿ ಕಟ್ಟಿ ಕೊಡುತ್ತಾಳೆ, ರಾತ್ರೆ ಎಲ್ಲರಿಗಿಂತ ತಡವಾಗಿ 12 ಗಂಟೆ ಮೀರಿದರೂ ತನ್ನ ಕೆಲಸ ಮುಗಿಸಿ ಮಲಗುತ್ತಿದ್ದ ಅವಳನ್ನು ಈಗ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನಲ್ಲ ... ನನ್ನನ್ನು ಕಣ್ರೆಪ್ಪೆಯಂತೆ ಜೋಪಾನ ಮಾಡಿದ  ಇನ್ನೂ ಮಾಡುತ್ತಿರುವ ಅಮ್ಮನಿಗೆ ಥ್ಯಾಂಕ್ಸ್ ಎಂದು ಹೇಗೆ ಹೇಳೋದು ಅಂತ ಯೋಚಿಸಿ ಅವಳೆದುರು ಮನಸು ತಲೆಬಾಗುತ್ತ ಇದೆಯಲ್ಲ.. ನಿನ್ನ ಬೆಟ್ಟದಷ್ಟು ಮಮತೆ ಪ್ರೀತಿಗೆ ಶಿರಬಾಗಿ , ಮನಸು ತುಂಬಿದ  ಕೃತಜ್ಞತೆಯಿಂದ ಕರಗಿದೆನಲ್ಲ... ಅಮ್ಮ...... ನಿನಗಿದೋ ಕೋಟಿ  ಕೋಟಿ ನಮನ .......
         ಗೆಳೆಯರು ೨ ಬಾರಿ ತಂದ ಪಾರ್ಸೆಲ್ ಜೊತೆಗೂ ಎರಡೆರಡು ಕೈಬರಹದ ಪತ್ರಗಳನ್ನು ಬರೆದು ಕಳುಹಿಸಿದಾಗ ಉಮ್ಮಳಿಸಿ ಬಂದ ಅಳುವನ್ನು , ಒಲೆಯಲ್ಲಿ ಕಾಯಿಸಿ ಕಳುಹಿದ್ದ ಗೇರುಬೀಜದ ಸವಿಯ ಖುಷಿಯನ್ನು ನಿನ್ನ ಬಿಟ್ಟು ಯಾರೂ ನೀಡೋಲ್ಲ .. .. ನಿನ್ನ ನಾಲ್ಕಾರು ಪತ್ರಗಳನ್ನು ಕೈಯಲ್ಲಿ ಹಿಡಿದು ನಿನ್ನದೇ ಹಸಿಹಸಿರ ನೆನಪಲ್ಲಿ  " ಅಮ್ಮೀ ಎಂತ ಮಾಡ್ತಾ ಇದ್ದೀ.... " ಅನ್ನುವ ಹಿಮ್ಮೇಳದಲ್ಲಿ ಸವಿಯುವ ಅದೃಷ್ಟ ಈ ಜನುಮದಲ್ಲಿ ನಿನ್ನಿಂದ ನನಗಾಗಿದೆ . ನನ್ನ ಅಮ್ಮನಾಗಿ ನೀನು ಸಿಕ್ಕುದಕ್ಕೆ ಆ ದೇವರಿಗೊಂದು ಥ್ಯಾಂಕ್ಸ್ . ನಿನ್ನ ಪಾದ ಮುಟ್ಟಿ ತಲೆ ಇಟ್ಟು ಮರುಗಬೇಕೆಂದು ಮತ್ತೆ  ಮತ್ತೆ ಎಣಿಸುತ್ತದೆ . ನನ್ನ ಜೀವನದಲ್ಲಿ ಇದುವರೆಗೆ ಮಾಡಿದ್ದ ತಪ್ಪು ಇದ್ದರೆ ಕ್ಷಮಿಸು . ನಿನ್ನನ್ನು ನನ್ನ  ಕೊನೆಗಾಲದವರೆಗೂ ಭದ್ರವಾಗಿ ನೋಡಿಕೊಳ್ಳುತ್ತೇನೆ . ನೀನು ನನಗೆ ಬೇಕು . ನನ್ನೊಂದಿಗೇ  ಇರಬೇಕು . ನಿನ್ನ ಸಾಲ್ಗಳ ಮೇಲೆ ನನ್ನ ಬದುಕೇ ನಿಂತಿದೆ . ನಾನಿರುವವರೆಗೂ ನಿನ್ನ ಪತ್ರಗಳು ಶತ - ಸಹಸ್ರ- ಸಾವಿರವಾಗಿ ನನ್ನೆಡೆಗೆ ಹರಿದು ಬರಲಿ . ನಿನ್ನೊಲುಮೆ ಎಂದೆಂದೂ ನನಗಿರಲಿ. ಅಜೇಯವಾದ ಬಾಳ್ವೆ ನಿನ್ನದಾಗಲಿ . ಮತ್ತೆ ಮತ್ತೆ ಓದಿ ಖುಷಿಗೊಂಡು  ಮನಕಲಕಿ ಅತ್ತು ಭಾವದಲೆಯಲ್ಲಿ ತೇಲಿ ನಿನ್ನೆಡೆಗೆ ನನ್ನ ಮನ ಓಡಿಬರುವಂತೆ ಮಾಡುವ ಚೈತನ್ಯಶಕ್ತಿ ನಿನ್ನ ಪತ್ರಗಳಿಗಿದೆ .............
         ಈ ಬಾರಿ ನೀನು ಕಳುಹಿಸಿರುವ ಒಣಮೀನು, ಅಕ್ಕಿರೊಟ್ಟಿ,ಪೆನ್ನು ಪೆನ್ಸಿಲು , ಬಾಚಣಿಗೆ ಮುಲಾಮು, ಅಡುಗೆಪುಸ್ತಕ , ಲವಂಗದ ಎಲೆ,ನೂಲು, ಮೆಜೆಸ್ಟಿಕ್ ಕ್ಯಾಲೆಂಡರ್ , ಜೇನುತುಪ್ಪ, ಉಪ್ಪಿನಕಾಯಿ ಎಲ್ಲ ನನಗೆ ಸಿಕ್ಕಿದೆ . ಮುಂದಿನ ಸಲದ ಪಾರ್ಸೆಲ್ ಗಾಗಿ ಚೀಟಿ ರೆಡಿ ಮಾಡ್ತಿದ್ದೀನಿ . ಆದ್ರೆ ನಿಂಗೊತ್ತು ಅಲ್ವ ನಾನು ಕಾಯ್ತಾ ಇರೋದು ನಿನ್ನ ಪತ್ರಕ್ಕಾಗಿ  ಅಂತ ... ಹಾಗಾದ್ರೆ ಬೇಗ ಬರಿ.....

ಇಂತಿ ನಿನ್ನ ಮುದ್ದಿನ ಮಗಳು                                                                                                                          
    ಅಮ್ಮಿ

                                                                                                                            - ಕಾವ್ಯಮಯಿ


                                       

Saturday 18 January 2014

ನಂಬಿಕೆ ಮತ್ತು ಕಾಕತಾಳೀಯ

           ಸಮಾಜದಲ್ಲಿ ಮನುಷ್ಯನೊಬ್ಬ ಸಂಘಜೀವಿ. ಮಗುವಾಗಿ ಹುಟ್ಟುತ್ತಲೇ ಭಾವಗಳ ಬಂಧ  ಬೆಸೆದು ಬದುಕನ್ನು ರೂಪಿಸುವ ಸಮಾಜದಲ್ಲಿ ಬೆರೆತು ಬಾಳುವ ಮೌಲ್ಯ ಕಲಿಯುತ್ತಲೇ ಬೆಳೆಯುತ್ತಾನೆ .. ಆ ಬಂಧದ ಮೊದಲ ಕೊಂಡಿ ಹುದುಗಿರುವುದೇ ನಂಬಿಕೆಯಲ್ಲಿ.  ಅಮ್ಮನ ಅಪ್ಪುಗೆಯಲ್ಲಿ ಆಕೆಯ ತನುವಿನ ಅಮೃತದ  ಸವಿಯಲ್ಲಿ  ಆಕೆಯ ನುಡಿಯಲ್ಲಿ ಈ ನಂಬುಗೆಯ ಅಚ್ಚು ಮೊದಲು ಮೂಡುತ್ತದೆ. ಆಮೇಲೆ ಅಪ್ಪ, ಅಣ್ಣ , ತಂಗಿ, ತಮ್ಮ , ಬಳಗ ಹೀಗೆ ಸಮಾಜಮುಖಿಯಾಗುತ್ತ ಸಾಗುತ್ತದೆ. ಹಾಗಾದಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ  ನಂಬಿಕೆಯ ಪಾತ್ರ ಎಷ್ಟಿದೆ ಅಲ್ಲವೇ ...
             ನಂಬಿಕೆ ಅನ್ನುವು ಮನಸ್ಸಿನ ಒಂದು ಸ್ಥಿತಿ ಅಥವಾ ಭಾವ. ನಾನು ನಿನ್ನನ್ನು ನಂಬುತ್ತೇನೆ ಎಂದಾಗ ನನಗೆ ನಿನ್ನ ಮಾತಿನ ಮೇಲೆ ವಿಶ್ವಾಸ ಇದೆ ಎಂದರ್ಥವಾಗುತ್ತದೆ.  ಇದ್ದುದು ಇದ್ದುದಂತೆ ಕಂಡಿತೆಂದಾಗ, ಇಲ್ಲವೆ ಬಲವಾದ ಪರಿಣಾಮದಿಂದ ಇನ್ನೊಬ್ಬನ ಮನಸ್ಸನ್ನು ನಾಟುವಂತೆ ಮಾಡಿದಾಗ , ನಾವು ಒಬ್ಬರ ಬಗ್ಗೆ ಏನು ಕಲ್ಪಿಸಿರುತ್ತೆವೋ ಅವರು ಅದನ್ನು ಉಳಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿಅವರ ಬಗೆಗೆ  ಪೂರಕವಾದ ಪ್ರಭಾವಲಯ ಉಲ್ಲಸಿತಗೊಂಡು ಪ್ರತಿಕ್ರಿಯೆಯನ್ನು ನೀಡುತ್ತದೆ .. ಅದುವೇ ನಂಬಿಕೆ .  ನಂಬಿಕೆ ಗಟ್ಟಿ ಇದ್ದಾಗ ಸಂಬಂಧಗಳೂ ಗಟ್ಟಿಯಾಗಿರುತ್ತವೆ. ಈ  ಭೂಮಿ ಮೇಲೆ ಒಳ್ಳೇದು ಏನೆ ನಡೆಯುತ್ತಾ ಇದ್ರೂ ನಂಬಿಕೆ ಮೇಲೆ. ಅಸತ್ಯದ ಮೇಲೆ ಇರುವ ನಂಬಿಕೆ ಲಾಭ ಇರುವ ವರೆಗೆ ಮಾತ್ರ. ಎಲ್ಲಿ ಲಾಭ ಕಮ್ಮಿಯೋ  ಅಲ್ಲಿ ನಂಬಿಕೆಯೂ ಅಸ್ತಿತ್ವ ಕಳೆದುಕೊಳ್ಳುತ್ತೆ.
              ನಾಸ್ತಿಕ ಮಂದಿ ದೇವರನ್ನು ನಂಬುತ್ತಾರೆ. ಆತನ ನಂಬಿಕೆಯಲ್ಲಿ ಪ್ರತಿಕ್ಷಣ ಜೀವನ ಕಳೆಯುತ್ತಾರೆ. ಒಳ್ಳೆಯದು ನಡೆದರೆ ದೇವರು ಇದ್ದಾನೆ , ಕೆಟ್ಟದು ಮಾಡಿದ್ರೆ ಎಲ್ಲ ದೇವರ ಆಟ ಅಂತ ಮುನ್ನಡೆಯುತ್ತೇವೆ. ದೇವರಿಗೆ ಹರಕೆ ಸಲ್ಲಿಸಿ ಪೂಜೆ ಮಾಡಿ ಓದದೆ ಹೋದರೆ exam ಪಾಸು ಮಾಡುತ್ತೇವೆ?.ಮನೆಯಲ್ಲಿಯಾರಿಗಾದರೂ  ಜೋರು ಹುಷಾರಿಲ್ಲದ ಸಮಯ ದೇವರ  ಮೊರೆ ಹೋಗುತ್ತೇವೆ .. ಆತ ಗುಣಮುಖನಾಗುತ್ತಾನೆ ಕೀರ್ತಿ ದೇವರಿಗೆ .... ಆದರೆ ಆತನ ಜೀವದ ನಾಜೂಕು ಸ್ಥಿತಿಯಲ್ಲಿ ವೈದ್ಯಕೀಯ ನೆರವು ಇದ್ದುದು ಹೌದಲ್ಲವೇ? ಅದೇ ರೀತಿ ಕಾಕತಾಳಿಯ. ಅದು ನಮ್ಮ ಪರಿಶ್ರಮದ ಫಲವಲ್ಲ ,ನಾವದನ್ನು ನಿರೀಕ್ಷೆ ಕೂಡ ಮಾಡಿರೋದಿಲ್ಲ ನಮಗೆ ಒಳ್ಳೆಯದು ಮಾಡಲೆಂದೇ ಮರೆಯಲ್ಲಿ ಕೂತಿದ್ದು ಧುತ್ತನೆ ಎದುರು ಬಂದು ನಿಲ್ಲುವ ನೆಂಟ. (ittefak ) ಹಲವಾರು ಬಾರಿ ಕಾಕತಾಳೀಯವಾಗಿ ನಡೆದ ಘಟನೆಗಳಿಂದಾಗಿ ನಂಬಿಕೆಯೂ ಮೂಡುತ್ತದೆ . ಇನ್ನಷ್ಟು  ಜನರನ್ನು ನಂಬುವಂತೆ ಮಾಡುತ್ತದೆ. ಹೀಗೇ ನಂಬಿಕೆ ಮತ್ತು ಕಾಕತಾಳೀಯಗಳ ನಡುವೆ  ಬದುಕು ಪಲ್ಟಿ  ಹೊಡೆಯುತ್ತಾ ಸಾಗುತ್ತದೆ...........

                                                                                                                       - ಕಾವ್ಯಮಯಿ 

Wednesday 15 January 2014

ಅಭೀಷಾ ಮತ್ತು ಅಮ್ಮ ಮಗುವಿನ ಬಂಧ

         ಅಬ್ಬಾಸಿಯಾದ ನಮ್ಮ ಫ್ಲಾಟ್ ನ  ಎದುರುಗಡೆ ಪ್ಲಾಟ್ ಗೆ ಹೊಸದಾಗಿ  ತಮಿಳು ಕ್ರಿಶ್ಚಿಯನ್ ಕುಟುಂಬ ಕಳೆದ ತಿಂಗಳು ವಾಸಕ್ಕೆ ಬಂದಿತ್ತು .ಒಬ್ಬ ಪಾಸ್ಟೆರ್, ಅವನ ಹೆಂಡತಿ , ಇಬ್ಬರು ಹೆಣ್ಣು ಮಕ್ಕಳು ಏಂಜಲ್ ಮತ್ತು ಅಭೀಷಾ ಹಾಗೂ ಹೆಂಡತಿಯ ಸೋದರ ... ಬಂದ ಒಂದೆರಡು ದಿನದಲ್ಲೇ ನಮ್ಮ ಪರಿಚಯ ಸಾಧ್ಯವಾಯಿತು. ಅವರಿಗೆ ಸೂಕ್ತಸಲಹೆಗಳನ್ನು ನೀಡುತ್ತ ಇದ್ದೆವು.. ಆ ಮನೆಯೊಡತಿಯೊಂದಿಗೆ ನಮ್ಮ ಪರಿಚಯ ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ನಾವು ೮ ತಿಂಗಳ ಮಗು ಅಭೀಷಾಳನ್ನು ಸಮಯ ಇದ್ದಾಗ ನಮ್ಮ ಮನೆಗೂ ಕಳಿಸಲು ಕೇಳಿದ್ದೆವು . ಅವರ ಮನೆಯಲ್ಲಿ ಟಿವಿ ಇರಲಿಲ್ಲವಾದ್ದರಿಂದ ದೊಡ್ಡ ಹುಡುಗಿ ಏಂಜಲ್ ಮಗುವನ್ನು ಕರಕೊಂಡು ನಮ್ಮ ರೂಮ್ಗೆ ಬರುತ್ತಿದ್ದಳು ... ಮೊದಲ ದಿನವಂತೂ ನಮಗೆ ಖುಷಿಯೋ ಖುಷಿ ... ಎಷ್ಟೋ  ಸಮಯದ ಬಳಿಕ ಮಗುವೊಂದನ್ನು ಎದೆಗಾನಿಸಿ ಹಿಡಿದಿದ್ದೆವು... ನಾನು,ನನ್ನ ಹಬ್ಬಿ ಮತ್ತು ಶೇರಿಂಗ್ನಲ್ಲಿ ನಮ್ಮೊಂದಿಗೆ ಇರುವ ವೆಂಕಟೇಶ್ , ಶೋಭಾ ಅವರಿಗೂ ಬಲು ಖುಷಿಯಾಗಿತ್ತು. ಆ ದಿನ ಆ ಪುಟ್ಟ ಮಗು ನಮಗೆ ನೀಡಿದ ಸಂಭ್ರಮ ನಾನು ಇನ್ನೂ ಮರೆಯಲಾರೆ, ನೆನಪಿನಾಳಕ್ಕೆ ಹೋಗಿ ಹುದುಗಿದರೆ  ಮಧುರ ಕ್ಷಣಗಳನ್ನು ಬೇರೆ ಯಾವುದೇ ವಿಷಯದಿಂದ ಪುನರ್ರಚಿಸಲು ಆಗುವುದಿಲ್ಲ .
        ನಿಜ ಮಕ್ಕಳು  ಪ್ರಕೃತಿಯ ತುಂಬಾ ಸುಂದರವಾದ ಪ್ರಕೃತಿಯ ಕೃತಿಗಳು. ಎಲ್ಲ ಮಕ್ಕಳೂ ಚಂದ.. ಮಕ್ಕಳು ನಗುತ್ತ ಇದ್ದರೆ ಎಷ್ಟು ಅಂದ! ಸಾಕ್ಷಾತ್ ಭಗವಂತನು ವೇಷ ಮರೆಸಿ ಮಡಿಲಲ್ಲಿ ನಿಂದು ಕೈಕಾಲು ಆಡುವಂತೆ  ಒಂದು ಭಾಸ. ಎಂತಹಾ ಕಟುಕ ಮನಸನ್ನು ಗೆಲ್ಲಿಸಿ ಶರಣಾಗಿಸುವ ಮೋಹಕ ಮೃದು ಮನಸ್ಸು !!! ನಿಜವಾಗಲೂ ಅದ್ಭುತ ! ಮಗುವನ್ನು ಕಂಡಾಗ ಈ ಸೃಷ್ಟಿ ಅದೆಷ್ಟು ಸೌಂದರ್ಯದ ವಿಶಾಲ ಉದ್ಯಾನ... ಅದೆಷ್ಟು ಕ್ರಿಯಾಶೀಲ ಅಂತರಂಗ ಬೆಸುಗೆ.. ನೋವುತಣಿಸುವ ಅಪರಿಮಿತ ಜೀವಜಲಧನ.. ಬದುಕಿನ ಮುನ್ನಡೆಗೆ ಅರಿವಿಗೆ ಬರದ ಸಾವಿರದೊಂದು ಪ್ರೇರಣೆ!!!
         ಹುಂ! ಆ ಮಗು ಯಾರದೋ ಏನೋ.. ಆದರೆ ನಮ್ಮ ಮನೆಯಂಗಳದಲ್ಲಿ ಸಂತಸದ ಮಳೆ ಸುರಿಸಿದ ಬಾನು. ನಮ್ನಮ್ಮದೇ ವ್ಯವಹಾರದಲ್ಲಿ ಮುಳುಗಿದ್ದವರಿಗೆ ಇದೆಲ್ಲಾ ಬಿಟ್ಟು ಇನ್ನೂ ಇದೆ ನಾನಾ ಕಡೆ ನೋಡಿ ನಗುನಗತಾ ಇರಿ ಎಂದು ಮರೆತ ನಗುವನ್ನು ಮತ್ತೆ ತಂದುಕೊಟ್ಟ ದೇವಕನ್ಯೆ! ಮಕ್ಕಳ ವಿನೋದದ ಗುಂಗನ್ನು ಸವಿಯುವ ಮೌನ ಹೃದಯಗಳಿಗೆ ಯಾರ ಮಗುವೂ ಬೇರೆಯದಲ್ಲ... ನಮ್ಮ ಮಗುವಷ್ಟೇ ಕಾಳಜಿ ಪ್ರೀತಿ ಅದೆಲ್ಲಿಂದ ಸುರಿಸುರಿದು ಬರುತ್ತದೋ ನನಗೆ ತಿಳಿಯದು. ಎಷ್ಟೋ ಬಾರಿ ಅವಳನ್ನು ತಟ್ಟಿ ನಿದ್ದೆ ಮಾಡಿಸಿ ಮನೆಗೆ ಕಳಿಸಿದುದುಂಟು . ಅಭಿಷಾ ಅಂತೂ ನಮ್ಮೆಲ್ಲರ ಮನದ ಶಾಶ್ವತ ನಿವಾಸಿ. ನಮಗವರ ಭಾಷೆ ಬರದಿದ್ದರೂ ಮೂಕವಾಗಿ ಸಂವಹನ ಮಾಡುತ್ತೇವೆ.. ಅಭೀಷಾಗೆ ನಮ್ಮ ಟಿವಿಯ 'ಕುಡಲಾ ತೆಲಿಪುಗ' ಶೀರ್ಷಿಕೆ ಗೀತೆಯ 'ಚಂದ ಉಂಟಲ್ಲ' ಅನ್ನುವ ಪದ ಬಹಳ ಬಹಳ ಇಷ್ಟ ಅವಳ ಭಾಷೆ ಅರಿಯದ ನಾವು ಈ ಪದ ತುಸು ಸ್ವರ ನೀಡಿ ಹೇಳಿದರೆ ಬಾಯಗಲ ನಗುತ್ತಾಳೆ.ಬೇರೇನೆ ಅಂದರೂ ತನ್ನದೇ ಮುಗ್ಧ ಕಾರ್ಯಕಲಾಪದಲ್ಲಿ ವಿಹರಿಸುತ್ತಾ ನಮ್ಮ ಗೊಡ್ಡುತನವನ್ನು(!!) ಆ ಮುದ್ದುಕಂದ ಕೇವಲ ನಮ್ಮ ಕಣ್ಣುಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾಳೆ . ಮಕ್ಕಳೇ ಹಾಗೆ ಅವರಿಚ್ಛೆಗೆ  ವಿರುದ್ಧವಾದರೆ ನಮ್ಮ ಮೂತಿಗೆ ಒದೆಯುವಂತೆ ಬಿಡುತ್ತಾರೆ ತಮ್ಮ ಅಳುವೆಂಬ ಅತಿದೊಡ್ಡ ಪ್ರಬಲ ಬ್ರಹ್ಮಾಸ್ತ್ರ !! .ಆಸ್ಪತ್ರೆಯಲ್ಲಾದರೆ sevoflurane ಮೂಸಿಸಿಯೋ ಇಲ್ಲವೇ  paracetamol ಗೆ midazolam ಸೇರಿಸಿ ಮಲಗಿಸಿಬಿಡುತ್ತೇವೆ. ಮನೆಯಲ್ಲಿ ಹಾಗೆ ಮಾಡಲು ಬರದು ಹಾಗಾಗಿ ಈ ಯುದ್ಧದಿಂದ ಯಾರೂ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. !
        ನಿನ್ನೆ ನಮ್ಮೊಂದಿಗೆ ಆದದ್ದೂ ಅದೇ . ಸುಮಾರು ದಿನಗಳಿಂದ ಜ್ವರ ಹಾಗು ಶೀತ ಕಫ಼ ದೋಷದಿಂದ ಅಭೀಷಾ ಅರೋಗ್ಯ ಕೆಟ್ಟಿತ್ತು . ನಮ್ಮ ಮನೆಗೆ ಬಂದಿರಲಿಲ್ಲ .  ನಿನ್ನೆ ಸಂಜೆ ಅವರಮ್ಮ ಅಪ್ಪ ತುರ್ತುಕಾರ್ಯಕ್ಕಾಗಿ ಮನೆಯಿಂದ ಹೊರಹೋಗಬೇಕಾಯಿತು. ಅರ್ಧ ಗಂಟೆ ಮಕ್ಕಳನ್ನು ನಮ್ಮ ಮನೆಗೆ ಬಿಟ್ಟಿದ್ದರು . ಅವರತ್ತ ಹೋಗುತ್ತಲೇ ಅಭೀಷಾ ಆಳುವುದಕ್ಕೆ ಪ್ರಾರಂಭ ಮಾಡಿದಳು . ಎಷ್ಟೇ ಸಮಾಧಾನ ಮಾಡಿದರೂ ೧ ಗಳಿಗೆ ಸುಮ್ಮನಿರಲಿಲ್ಲ . ಇಷ್ಟು ದಿವಸದಿಂದ ಅಳು ಅಂದರೆ ಏನೆಂದೇ ಅರಿಯದಂತೆ ನಗುತಲಿದ್ದ ಮಗು ಇವತ್ತು ಯಾಕೆ ಹೀಗೆ ಮಾಡುತ್ತಿದೆ? ಗೋಡೆ ತುಂಬಾ ಅಂಟಿಸಿದ್ದ ಮಕ್ಕಳ ಫೋಟೋ ಕಂಡು ಮಂತ್ರಮುಗ್ಧವಾಗುತ್ತಿದ್ದ ಮಗು ಅಂದು ರಚ್ಚೆ ಹಿಡಿದು ಅಳುತ್ತಿತ್ತು. ಶೀತ ಇನ್ನೂ ಗುಣವಾಗದ ಕಾರಣ ಅದರ ಮೂಗು ಕಟ್ಟಿ ಹೋಗಿತ್ತು . ಉಸಿರಾಡಲು ಕಷ್ಟವಾಗುತ್ತಿತ್ತು . ಎಲ್ಲಕಿಂತ ಹೆಚ್ಚಾಗಿ ಅಮ್ಮನನ್ನು miss  ಮಾಡಿಕೊಳ್ಳುತ್ತಿತ್ತು . ನಾವು ಏನೇ ಪ್ರಯತ್ನ ಮಾಡಿದರು ಸುಮ್ಮನಿರಿಸಲಾಗಲಿಲ್ಲ... ಪುಟ್ಟ ಪುಟ್ಟ ಕಣ್ಣುಗಳಲ್ಲಿ ಕುಂಭದ್ರೋಣ ಮಳೆಯಂತೆ ಸುರಿಯಿತು ಕಣ್ಣೀರು . ತಟ್ಟಿ  ಮಲಗಿಸಲು ನೋಡಿದೆ , ಉಸಿರಾಡಲು, ಅಳಲು, ಉಗುಳು ನುಂಗಲು  ಸಾಧ್ಯವಾಗದೆ ಯಾತನೆಯನ್ನು ಪಡುತ್ತಿತ್ತು.. ನಮಗೋ ಏನು ಮಾಡಲೂ ಗೊತ್ತಾಗಲಿಲ್ಲ. ನಾನು ಸಾಧ್ಯವಾದಷ್ಟು ಮೂಗೊರೆಸಿ ಮುಖ ಒರೆಸಿ ಸಮಾಧಾನ ಮಾಡಿದರು ಸರಿಕಾಣಲಿಲ್ಲ. drops ಏನಾದರು ಇದೆಯೇ ನೋಡಿದೆ ಸಿಗಲಿಲ್ಲ. ಮಗುವನ್ನು ಸುಮ್ಮನಿರಿಸಲು ನನ್ನ ಹಬ್ಬಿ ಕೂಡಾ ಮಾಡಿದ ಪ್ರಯತ್ನ ವಿಫ಼ಲವಾಯಿತು .
          ಸಂಜೆ ೭ ಗಂಟೆಗೆ ಅವರಮ್ಮ ಬಂದರು. ಅಮ್ಮನನ್ನು ಕಾಣುತ್ತಲೇ ಗಪಚುಪ್. ಅಮ್ಮನ ಭುಜವೇರಿ  ಅಳುವು ನಿಂತು ನಗು ಮೂಡಿ ಅವಳನ್ನು ಸಮಾಧಾನ ಮಾಡಲು ಸಲ್ಲದ ಮಂಗಚೇಷ್ಟೆಮಾಡುತ್ತ ನಿಂತವರತ್ತ ನೆತ್ತನೋಟ ನೆಟ್ಟಂತೆಯೇ ನೋಡುತ್ತಾ ಮನೆ ಸೇರಿದಳು . ಟಾಟಾ ಎಂದು ಕೈಯ್ಯಾಡಿಸಿ ಯಥಾಸ್ಥಿತಿಗೆ  ಮರಳಲೆತ್ನಿಸಿದೆವು . ಮತ್ತೆ ಮತ್ತೆ ಅವಳ ಮುಖ ಕಣ್ಣ ಮುಂದೆ ಬರುತ್ತಿತ್ತು. ರಾತ್ರೆಯೆಲ್ಲ ಅವಳದೇ ಮಾತು ಕನಸು. ಅರ್ಧ ಗಂಟೆ ಅವಳನ್ನು ಸರಿಯಾಗಿ ನೋಡಲಿಕ್ಕೆ ಆಗಿಲ್ಲ. ಆದರೆ ಅಮ್ಮ ಬಂದಾಕ್ಷಣ ಅವಳ ಮನಸ್ಸು ಹೇಗೆ secure feel  ಮಾಡಿಕೊಂಡಿತು.. ಅಮ್ಮನ ಬರವು ಹೇಗೆ ತಿಳಿಯಿತು. ಎಲ್ಲ ದುಗುಡ ಅಮ್ಮನನ್ನು ಕಂಡಾಗ ಹೇಗೆ ದೂರವಾಯಿತು.. ಈ ಅಮ್ಮ ಮಗುವಿನ ಬಂಧ ವರ್ಣನಾಮಯ .. ಎಷ್ಟು ವರ್ಣಿಸಿದರೂ ಸಾಲದು .. ನನಗೂ... ಒಮ್ಮೆ ಮಗುವಂತೆ  ಅಮ್ಮನ ಮಡಿಲು ಸೇರುವ ತವಕವಾಯಿತು ....

                                                                                                                   
  - ಕಾವ್ಯಮಯಿ 




Thursday 2 January 2014

ಬಾರದ 'ನಾಳೆ 'ಗಾಗಿ ಬದುಕುವ ನಾವು.....

          ಜೀವನದಲ್ಲಿ ಪ್ರತಿಯೊಂದು ಸೆಕೆಂಡು ಕಳೆದಾಗಲೂ ಅದೊಂದು ನೆನಪಾಗಿ  ಭೂತಕಾಲಕ್ಕೆ ಜಾರಿಹೋಗುತ್ತದೆ . ನಿಮಿಷ, ಗಂಟೆ, ವರ್ಷಗಳಾಗಿ ಎಲ್ಲೋ ಹಿಂದೆ ಉಳಿದುಬಿಡುತ್ತದೆ . ಎಲ್ಲರೂ  ಪ್ರತಿಕ್ಷಣ ಏನಾದರೊಂದು ಕೆಲಸ ಕಾರ್ಯ ಮಾಡುತ್ತಲೇ ಇರುತ್ತೇವೆ . ಗತಿಸಿದ ಎಲ್ಲಾ ಕ್ಷಣಗಳನ್ನು ನೆನಪಿಡುವುದು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಅಕ್ಟೋಬರ್ 10ರಂದು 7.30ಕ್ಕೆ ಏನು ಮಾಡಿದೆ ಎಂದು ಕೇಳಿದರೆ ಏನೆನ್ನುವುದು?ಅದನ್ನು ನಾವು ಅದ್ಯಾವಾಗಲೋ ಮರೆತುಬಿಟ್ಟಿರುತ್ತೇವೆ . ತುಂಬಾ ದೊಡ್ಡ ಘಟನೆಗಳು ನಡೆದಿದ್ದರೆ ಅದನ್ನು ನೆನೆಪಿಡುತ್ತೇವೆ . ದಾರಿಯಲ್ಲಿ ಅಚ್ಚು ಹಾಕುತ್ತೇವೆ . ಚಿಕ್ಕಪುಟ್ಟದೆಲ್ಲವನ್ನು ನಮಗರಿಯದಂತೆ  ಮೆದುಳು save ಮಾಡುತ್ತಾ ಹೋಗುತ್ತದೆ.. 
         ವಿಶಾಲವಾದ ಬೋಳು ಮೈದಾನದಲ್ಲೋ ಅಥವಾ ಮರುಭೂಮಿಯಲ್ಲೋ ಮೈಲುಗಟ್ಟಲೆ ನಡಕೊಂಡು ಬಂದು ಹಿಂತಿರುಗಿ ನೋಡುವಾಗ ಎಲ್ಲೋ ಕಾಲೊತ್ತಿದ್ದ ಗುರುತು ಕಾಣುವುದಿಲ್ಲ. ಯಾವುದೊ  ದೊಡ್ಡ ಬಂಡೆ , ಚುಕ್ಕಿಯಂತೆ ಕಾಣುತ್ತೆ . ಜೀವನವೂ ಅದರಂತೆ ಹಿಂತಿರುಗಿ ನೋಡಿದರೆ ಉಂಡದ್ದು ಕುತಿತದ್ದು ಏನೂ ಇಲ್ಲ, ಮುಖ್ಯವಾದುದು ಮಾತ್ರ ಬಣ್ಣ ಹೊಡೆದಂತೆ , wordpad ನಲ್ಲಿ B- ಬೋಲ್ಡ್ ಆಗಿ ಕಾಣುತ್ತದೆ . 
         ಎಂಥ ಅದ್ಭುತ ಅಲ್ಲವಾ ... ಎಷ್ಟೋ ಸಹಸ್ರ  ಕ್ಷಣಗಳನ್ನು ಜೀವಿಸಿರುತ್ತೇವೆ. ಆದರೂ 'ಆ ' ಒಂದು ಕಪ್ಪು ಚುಕ್ಕೆಗಾಗಿ ಇಂದು  ಮುಂದೂ ಸೊರಗುತ್ತೇವೆ.............. ಕ್ಷಣ ಕ್ಷಣಕ್ಕೂ ನೆನಪಾಗಿ ನೆನೆಪಿಸಿ ಘಟಿಸಿದುದಕ್ಕಿಂತ ಹೆಚ್ಚು ಹೆಚ್ಚಾಗಿ ಕನವುತ್ತಾ ಎಂದು ನಮ್ಮನ್ನು ಒಳಗೊಳಗೇ ಕೊಲ್ಲುತ್ತದೆ ನಮ್ಮ ಅಂತಸ್ಥೈರ್ಯವನ್ನು . ನೆಟ್ಟಗೆ ಕುಳಿತಿದ್ದವನೂ ಇಂಚು ಇಂಚಾಗಿ ಕುಸಿಯುತ್ತಾನೆ. ಆತನ ಶರೀರದ ಭಂಗಿಯಲ್ಲೇ ಆತನ ಮನಸಲ್ಲಿ ಏನೇನಾಗುತ್ತಿದೆ ಅನ್ನೋದನ್ನ ಕೆಲವೊಮ್ಮೆ ಎಣಿಸೋಕೆ ಸಾಧ್ಯ . 
          ಇಂದಿನ ಜೀವನ ಹಿಂದಿಗೂ ಮುಂದಿಗೂ ಒಂದು link. ನಮ್ಮ ಮುಂದಿನದು ಹಿಂದಿನದಕಿಂತ ಚೆನ್ನಾಗಿರಬೇಕು ಎಂದೇ  ಕನವುತ್ತಾ ಇಂದನ್ನು ಮುಂದಿಗಾಗಿ ಅಣಿ ಮಾಡುತ್ತೇವೆ . ಇಂದನ್ನು ನಿರ್ಮಿಸಲು ಈ ಹಿಂದೆಯ 'ಇಂದಲ್ಲಿ ' ಶ್ರಮ ಪಟ್ಟಿರುತ್ತೇವೆ. ನಾಳೆಯು ನಮ್ಮೆಡೆಗೆ ಬಂದಾಗಲೂ ಅದನ್ನು ಇಂದೆಂದೇ ಎಣಿಸಿ ಮತ್ತೆ ಮುಂದಿಗಾಗಿ ಗೆಜ್ಜೆ ಕಟ್ಟುತ್ತೇವೆ. ಬದುಕು ಚಲಿಸುತ್ತಾ ಸಾಗುತ್ತದೆ . ನಾವೆಣಿಸುವ ನಾಳೆ ಬರೋದೆ ಇಲ್ವಲ್ಲ... !!! 'ನಾಳೆ''ಗಾಗಿ ಕಾದವರಿಗೆ ಅದು 'ಇಂದಾ'ಗಿ ಬಂದಿರುವುದು ಅರಿವಿರುವುದಿಲ್ಲ. ಮತ್ತೆ ಎಂದಿನಂತೆ ನಾಳೆಗಾಗಿ ಕಾಯುತ್ತಾರೆ. ಮೈಯೆಲ್ಲಾ ನೆರೆಗಟ್ಟಿ , ಕೈಕಾಲು ಬಲಗುಂದಿ, ತಲೆಕೂದಲು ಬಿಳಿಯಾಗಿ i mean to say ಮುದಿಯಾಗಿ ಕೊನೆಯುಸಿರು ಒಳಹೊಕ್ಕುವವರೆಗೆ.  ಆಮೇಲೆ ಎಲ್ಲಿಯ ಇಂದು ನಾಳೆ ? ಎಲ್ಲವೂ  
ನಿನ್ನೆ,ಮೊನ್ನೆ,.................  

Saturday 16 November 2013

ಮುನ್ನುಡಿ

                 ಪ್ರತಿಯೊಬ್ಬ ಮನುಷ್ಯನ ಜೀವನವೂ ವಿಷಯ ಘಟನೆಗಳ ಸರಪಣಿ. ಪ್ರತಿಕ್ಷಣ ಒಂದಿಲ್ಲೊಂದು ಘಟಿಸುತ್ತಲೇ ಇರುತ್ತದೆ.  ಹಲವು ಸಾಮಾನ್ಯ ಕ್ರಮವಾದರೆ ಇನ್ನು ಹಲವು ಅನಿರೀಕ್ಷಿತ , ಅಸಾಮಾನ್ಯ , ಊಹೆಗೆ ನಿಲುಕದ್ದು. ಬರೆಯಲು ಹೋದರೆ ಎಲ್ಲರ ಬದುಕೂ ಕಾದಂಬರಿಯೇ .  ವ್ಯಕ್ತಿಯ ಜೀವನದ ಹಳೆಯ ವಿದ್ಯಮಾನವೆಲ್ಲವನ್ನು ಜೊತೆಗೂಡಿದರೆ ಆತನು ಯಾವ ಸಿನೆಮಾದ ನಾಯಕನಿಗೂ ಸರಿಸಮನಾಗಿ ನಿಲ್ಲುತ್ತಾನೆ . ಯಾಕೆಂದರೆ ಆತನು ನಿಜಾರ್ಥದಲ್ಲಿ ಜೀವಿಸಿರುತ್ತಾನೆ. ಸಂದರ್ಭಕ್ಕೆ ತಕ್ಕಂತೆ ಕಾಯಕಗಳು ನಡೆಯುತ್ತಾ ಸಾಗಿರುತ್ತವೆ.
                  ಅಹಿತಕರವಾದ ಯಾವುದಾದರು ಕಾರ್ಯ ನಡೆದರೆ ಅವನಿಗೆ ಹಾಗಾಗಬಾರದಿತ್ತು , ಮೊನ್ನೆಯಷ್ಟೇ ಮದುವೆಯಾಗಿತ್ತು, ನಿನ್ನೆಯಷ್ಟೇ ಹೊಸ ಕೆಲಸಕ್ಕೆ ಸೇರಿಕೊಂಡ ,  ಅವಳಿಗೆ  ಹೆತ್ತ ಮಗುವ ಮುಖ ನೋಡುವ ಭಾಗ್ಯ ಇರಲಿಲ್ಲ .... ರಾಯರು ಕಳೆದ ವಾರ ತಾನೆ  ಷಷ್ಟಭ್ಯ  ಮುಗಿಸಿದ್ದರು ... ಈಗ ಹೀಗಾಯಿತು ಎನ್ನುತ್ತಾ  ಬಳಲಿದ ಮಂದಿಯ ಬಗ್ಗೆ ಮಾತಾಡುತ್ತಾರೆ. ಅವರ ಜೀವನ ನೋಡಿ ದುಃಖಿಸುತ್ತಾರೆ..  ಅವರ ಒಳ್ಳೆಯತನವನ್ನು ಹೊಗಳುತ್ತಾರೆ.  ಬದುಕು ಎಲ್ಲಾರದೂ ಇಷ್ಟೇ ಕಣ್ರೀ . ನಾಳೆ ನಾವು ಸತ್ರೂ  ಅಷ್ಟೇ . ಎಲ್ಲರೂ ನಾಯಕರಾಗಿರೋ ಈ ಲೈಫ್ ಅನ್ನೋ ಕಾದಂಬರಿ ಅಷ್ಟೇ ಚೆನ್ನಾಗಿ ಪಾಠಾನೂ ಕಲಿಸುತ್ತೆ ... ವಿಭಿನ್ನವಾಗಿರೋ ಈ ಲೋಕದಲ್ಲಿ ನನ್ನೊಂದಿಗೆ ನಡೆಯೋ ಘಟನೆಗಳನ್ನು ಬರಹಕ್ಕೆ ಇಳಿಸಬೇಕೆಂಬ ಸಣ್ಣ ಪ್ರಯತ್ನ ನನ್ನದು . ಇವು ನನ್ನ ಅನಿಸಿಕೆಗಳಾಗಿರುತ್ತವೆಯೇ ಹೊರತು  ತೀರ್ಮಾನವಲ್ಲ... ಯಾಕೆಂದರೆ ಪ್ರತಿಯೊಬ್ಬನೂ ಯೋಚನೆ ಮಾಡುವ ದಿಕ್ಕು ಬೇರೆ ಬೇರೆ ಇರುತ್ತದೆ.
                 ಹಾಗಾಗಿಯೇ ಈ ಅಂಕಣಕ್ಕೆ  'ಕನ್ನಡಕದಿಂದ ಕಂಡಿದ್ದು' ಎಂದು ಹೆಸರು ನೀಡಿದ್ದು .ನನಗೆ ನನ್ನ ಕಣ್ಣು ( ಮನಸ್ಸು) ಏನು ಕಾಣಿಸುತ್ತದೆ ಅದನ್ನೇ ತಾನೆ ಬರೆಯಲು ಸಾಧ್ಯ..


                                                                                     
  -ಕಾವ್ಯಮಯಿ