ಎಂಟು ತಿಂಗಳ ಹಿಂದೆ ಕುವೈಟ್ ಎಂಬ ದೇಶಕ್ಕೆ ಬಂದಾಗ ಮನಸೊಳಗೆ ಇದ್ದದ್ದು ಹೊಸತೊಂದು ಕೌತುಕ . ಮೂರು ಮುಕ್ಕಾಲು ಸಾವಿರ ಮೈಲು ಆಗಸದಲ್ಲಿ ಹಾರಿ ಇಳಿದಾಗ ಬಿಸಿಕೊದಿವ ಗಾಳಿಯು ನೀಡಿದ ಸ್ವಾಗತದಲ್ಲಿ ಕುವೈಟ್ ಬಂತು ಎಂಬ ಹರ್ಷೋದ್ಗಾರ ಮೊಳೆಯಿತಾದರೂ ಹಿಂದೆ ತಿರುಗಿ ನೋಡಿದ್ರೆ ಅಪ್ಪ ಅಮ್ಮ ಯಾರೂ ಇರಲಿಲ್ಲ . ೪ ಗಂಟೆ ಮುಂಚೆ ಅವರನ್ನೆಲ್ಲ ಬಿಟ್ಟು ಬಂದಾಗಿತ್ತು . ಹಬ್ಬಿ ಜೊತೆ ಫ್ಲಾಟ್ ಗೆ ತೆರಳಿ ಮನೆಯಿಂದ ತಂದಿದ್ದ ಲಗೇಜನ್ನು ಬಿಡಿಸಿ ಜೋಡಿಸಲು ಅಣಿಯಾದೆ . ಆಗ ಸಿಕ್ಕಿತು ಆಸೆ ತುಂಬಿದ ಕಂಗಳಿಂದ ನಗುತ್ತ ಎತ್ತಿಕೊಳ್ಳು ಎಂದು ಕರೆಯುವಂತೆ ನೋಡುತ್ತಿದ್ದ ಪತ್ರವೊಂದು .......
ನನ್ನಮ್ಮ ಪ್ರೀತಿಯಿಂದ ಬರೆದ ಪತ್ರವದು ;ಏರ್ ಪೋರ್ಟ್ನಲ್ಲಿ ಕೊನೆ ತನಕವೂ ಜಾಗ್ರತೆ ಮಾಡು, ಗಂಡನನ್ನು ಚೆನ್ನಾಗಿ ನೋಡಿಕೋ ,ಊಟ ಸರಿಯಾಗಿ ಮಾಡು , ಕೋಪ ಮಾಡಬೇಡ , ಎಣ್ಣೆ ತಿಂಡಿ ತಿನ್ನಬೇಡ , ಬೆಳಿಗ್ಗೆ ಬೇಗ ಏಳು ಎಂದು ಹೇಳುತ್ತಾ, ಎರಡು ಕೈಗಳನ್ನು ನಡುಕದಿಂದ ಹಿಸುಕಿದಂತೆ ಹಿಡಿದು ಕಣ್ತುಂಬಾ ಇನ್ನೇನು ಒಡೆದು ಹೊರಹೊಮ್ಮಬೇಕೆಂದು ಕಾದು ಕೂತ ಕಣ್ಣೀರಿನಲ್ಲಿ ಕಳುಹಿಸಿದ್ದ ಪತ್ರ! ನಂಗೆ ಬೇಕಾದ ಡ್ರೆಸ್ಸು ,ತಿಂಡಿ ಹಪ್ಪಳ, ಹಲಸಿನ ಕಡುಬು ಎಂದು ಏನೆಲ್ಲ ಕಟ್ಟಿಕೊಟ್ಟಿದ್ದಳು... ಅದರೊಂದಿಗೆ ಅಮೂಲ್ಯ ಪ್ರೀತಿಯ ಧಾರೆ ಹೊತ್ತ ಪತ್ರ.......
ಅದೇ ಮಾತುಗಳು .... ನಾನು ಅವನ್ನೆಲ್ಲ ಹೇಗೆ ಪಾಲಿಸುತ್ತೇನೋ ಅನ್ನುವ ಭಯ ಅಮ್ಮನಿಗೆ. ಒಂದೆರಡು ಅಡುಗೆ ರೆಸೆಪಿಗಳು. ಕಿವಿಮಾತುಗಳು . 'ನೀವು ಚೆನ್ನಾಗಿರಿ, ನಮ್ಮ ಚಿಂತೆ ಬೇಡ , ಪುರುಸೊತ್ತು ಸಿಕ್ಕಿದಾಗ ಫೋನು ಮಾಡು , ಕರಿಮೆಣಸು ಬಿಡಿಸಿ ಇಡು, ಮೆಣಸಿನ ಹುಡಿ, ಸಾರಿನ ಹುಡಿ ಡಬ್ಬಿಯಲ್ಲಿ ಹಾಕಿ ಇಡು ' ಎಂದು ಪತ್ರದ ಖಾಲಿ ಕಡೆಯೆಲ್ಲ ಬರೆದು ಮಡಚಿ ಪಾರ್ಸೆಲ್ ಮಾಡಿದ್ದಳು ನನ್ನಮ್ಮ . ಇಂದು facebook, viber , whatsapp , skype ,GTalk ಏನೆಲ್ಲಾ ಬಂದಿದೆ . ಎದುರು ಬದುರು ಕೂತು video chat ಮಾಡಿದರೂ ಮುಗಿಯದೇ ಮತ್ತೆ ಕೇಳಬೇಕೆನಿಸುವ ನನ್ನ ದೇವತೆಯ ಮಾತು . ಬರೆದಷ್ಟೂ , ಹೇಳಿದಷ್ಟೂ ಮುಗಿಯದವಳ ಕುರಿತು. ... ಅವಳ ನೆನಪಾದಾಗಲೆಲ್ಲ video chat ಗಿಂತ ಅವಳ ಪತ್ರ ನೋಡೋದೇ ಜಾಸ್ತಿ .
ಅದೇನು ಅನುಭಾವವೋ ಅರಿವಾಗೋದಿಲ್ಲ . ಮಗುವಾಗಿ ಹುಟ್ಟಿದಂದಿನಿಂದ ಮದುವೆಯಾಗಿ ಇಷ್ಟು ದೂರ ಬರೋವರೆಗೂ ತನ್ನ ಜೀವವಾಗಿ ನನ್ನ ಪಾಲಿಸಿದ ಅವಳ ಸಮರ್ಪಣೆಗೆ ಯಾರೂ ಸಮಾನರಿಲ್ಲ . ಬೆಳಗ್ಗೆ ಎಲ್ಲರಿಗಿಂತ ಬೇಗ ಎದ್ದು ಒಲೆ ಹಚ್ಚಿ ಬಿಸಿಬಿಸಿಯಾಗಿ ಅನ್ನ ಪಲ್ಯ ತಿಂಡಿ ಮಾಡಿ ಬುತ್ತಿ ಕಟ್ಟಿ ಕೊಡುತ್ತಾಳೆ, ರಾತ್ರೆ ಎಲ್ಲರಿಗಿಂತ ತಡವಾಗಿ 12 ಗಂಟೆ ಮೀರಿದರೂ ತನ್ನ ಕೆಲಸ ಮುಗಿಸಿ ಮಲಗುತ್ತಿದ್ದ ಅವಳನ್ನು ಈಗ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನಲ್ಲ ... ನನ್ನನ್ನು ಕಣ್ರೆಪ್ಪೆಯಂತೆ ಜೋಪಾನ ಮಾಡಿದ ಇನ್ನೂ ಮಾಡುತ್ತಿರುವ ಅಮ್ಮನಿಗೆ ಥ್ಯಾಂಕ್ಸ್ ಎಂದು ಹೇಗೆ ಹೇಳೋದು ಅಂತ ಯೋಚಿಸಿ ಅವಳೆದುರು ಮನಸು ತಲೆಬಾಗುತ್ತ ಇದೆಯಲ್ಲ.. ನಿನ್ನ ಬೆಟ್ಟದಷ್ಟು ಮಮತೆ ಪ್ರೀತಿಗೆ ಶಿರಬಾಗಿ , ಮನಸು ತುಂಬಿದ ಕೃತಜ್ಞತೆಯಿಂದ ಕರಗಿದೆನಲ್ಲ... ಅಮ್ಮ...... ನಿನಗಿದೋ ಕೋಟಿ ಕೋಟಿ ನಮನ .......
ಗೆಳೆಯರು ೨ ಬಾರಿ ತಂದ ಪಾರ್ಸೆಲ್ ಜೊತೆಗೂ ಎರಡೆರಡು ಕೈಬರಹದ ಪತ್ರಗಳನ್ನು ಬರೆದು ಕಳುಹಿಸಿದಾಗ ಉಮ್ಮಳಿಸಿ ಬಂದ ಅಳುವನ್ನು , ಒಲೆಯಲ್ಲಿ ಕಾಯಿಸಿ ಕಳುಹಿದ್ದ ಗೇರುಬೀಜದ ಸವಿಯ ಖುಷಿಯನ್ನು ನಿನ್ನ ಬಿಟ್ಟು ಯಾರೂ ನೀಡೋಲ್ಲ .. .. ನಿನ್ನ ನಾಲ್ಕಾರು ಪತ್ರಗಳನ್ನು ಕೈಯಲ್ಲಿ ಹಿಡಿದು ನಿನ್ನದೇ ಹಸಿಹಸಿರ ನೆನಪಲ್ಲಿ " ಅಮ್ಮೀ ಎಂತ ಮಾಡ್ತಾ ಇದ್ದೀ.... " ಅನ್ನುವ ಹಿಮ್ಮೇಳದಲ್ಲಿ ಸವಿಯುವ ಅದೃಷ್ಟ ಈ ಜನುಮದಲ್ಲಿ ನಿನ್ನಿಂದ ನನಗಾಗಿದೆ . ನನ್ನ ಅಮ್ಮನಾಗಿ ನೀನು ಸಿಕ್ಕುದಕ್ಕೆ ಆ ದೇವರಿಗೊಂದು ಥ್ಯಾಂಕ್ಸ್ . ನಿನ್ನ ಪಾದ ಮುಟ್ಟಿ ತಲೆ ಇಟ್ಟು ಮರುಗಬೇಕೆಂದು ಮತ್ತೆ ಮತ್ತೆ ಎಣಿಸುತ್ತದೆ . ನನ್ನ ಜೀವನದಲ್ಲಿ ಇದುವರೆಗೆ ಮಾಡಿದ್ದ ತಪ್ಪು ಇದ್ದರೆ ಕ್ಷಮಿಸು . ನಿನ್ನನ್ನು ನನ್ನ ಕೊನೆಗಾಲದವರೆಗೂ ಭದ್ರವಾಗಿ ನೋಡಿಕೊಳ್ಳುತ್ತೇನೆ . ನೀನು ನನಗೆ ಬೇಕು . ನನ್ನೊಂದಿಗೇ ಇರಬೇಕು . ನಿನ್ನ ಸಾಲ್ಗಳ ಮೇಲೆ ನನ್ನ ಬದುಕೇ ನಿಂತಿದೆ . ನಾನಿರುವವರೆಗೂ ನಿನ್ನ ಪತ್ರಗಳು ಶತ - ಸಹಸ್ರ- ಸಾವಿರವಾಗಿ ನನ್ನೆಡೆಗೆ ಹರಿದು ಬರಲಿ . ನಿನ್ನೊಲುಮೆ ಎಂದೆಂದೂ ನನಗಿರಲಿ. ಅಜೇಯವಾದ ಬಾಳ್ವೆ ನಿನ್ನದಾಗಲಿ . ಮತ್ತೆ ಮತ್ತೆ ಓದಿ ಖುಷಿಗೊಂಡು ಮನಕಲಕಿ ಅತ್ತು ಭಾವದಲೆಯಲ್ಲಿ ತೇಲಿ ನಿನ್ನೆಡೆಗೆ ನನ್ನ ಮನ ಓಡಿಬರುವಂತೆ ಮಾಡುವ ಚೈತನ್ಯಶಕ್ತಿ ನಿನ್ನ ಪತ್ರಗಳಿಗಿದೆ .............
ಈ ಬಾರಿ ನೀನು ಕಳುಹಿಸಿರುವ ಒಣಮೀನು, ಅಕ್ಕಿರೊಟ್ಟಿ,ಪೆನ್ನು ಪೆನ್ಸಿಲು , ಬಾಚಣಿಗೆ ಮುಲಾಮು, ಅಡುಗೆಪುಸ್ತಕ , ಲವಂಗದ ಎಲೆ,ನೂಲು, ಮೆಜೆಸ್ಟಿಕ್ ಕ್ಯಾಲೆಂಡರ್ , ಜೇನುತುಪ್ಪ, ಉಪ್ಪಿನಕಾಯಿ ಎಲ್ಲ ನನಗೆ ಸಿಕ್ಕಿದೆ . ಮುಂದಿನ ಸಲದ ಪಾರ್ಸೆಲ್ ಗಾಗಿ ಚೀಟಿ ರೆಡಿ ಮಾಡ್ತಿದ್ದೀನಿ . ಆದ್ರೆ ನಿಂಗೊತ್ತು ಅಲ್ವ ನಾನು ಕಾಯ್ತಾ ಇರೋದು ನಿನ್ನ ಪತ್ರಕ್ಕಾಗಿ ಅಂತ ... ಹಾಗಾದ್ರೆ ಬೇಗ ಬರಿ.....
ಇಂತಿ ನಿನ್ನ ಮುದ್ದಿನ ಮಗಳು
ಅಮ್ಮಿ
